Wednesday, June 17, 2015

ಬಾಲ್ಯ ಎಂದರೆ ನಮ್ಮೆಲ್ಲರಿಗೆ ಸುಖದ ಅನುಭವವಾಗುತ್ತೆ. ಗಂಟೆಗಟ್ಟಲೆ ಅದನ್ನು ವರ್ಣಿಸಲು ಮಾತಿರುತ್ತೆ . ಆದರೆ ಕೆಲವರಿಗೆ ಬಾಲ್ಯ ಬಣ್ಣ ಬಳಿದ ಕನ್ನಡಿಯಂತಿರುತ್ತದೆ. ಅವರ ಬಾಲ್ಯ ಅವರಿಗೆ ಕಾಣಿಸುವುದೇ ಇಲ್ಲ. ಇಲ್ಲಿ ನೋಡಿ, ದಿನ ನಿತ್ಯ ನಮಗೆ ನೋಡಲು ಸಿಗುವ ಹುಡುಗಿಯೊಬ್ಬಳ ಬಾಲ್ಯದ ಕಾವ್ಯ ಇದು.  




ಕೆಂಪು ದೀಪದಂತೆ ಬಾಲ್ಯ
--------------------------

ಬಾಲ್ಯ, ನನ್ನ ಬಾಲ್ಯ,
ನೆನೆದು ಹಾಡುವಂಥದ್ದೇನಲ್ಲ ಬಿಡಿ ನನ್ನ ಬಾಲ್ಯ.....

ನಿಮ್ಮಂತೆ ನನಗೆ ಹಿತವಾದ ನೆನಪುಗಳಿಲ್ಲ,
ಬಣ್ಣಬಣ್ಣದ ಫ್ರಾಕುಗಳಿಲ್ಲ ,
ಬಿದ್ದು ಅಳಲು ಸೈಕಲ್ ಇಲ್ಲ ,
ಸೂರಿಲ್ಲ, ಮಾಡಿಲ್ಲ , ಹಡೆದವ್ವ ಅಪ್ಪನ ಹಿತವಾದ ಮಾತಿಲ್ಲ ,
ಹ್ಞು ......
ಇವೆಲ್ಲ ಬಿಡಿ, ಕೆಲವೊಮ್ಮೆ ತಂಗಳು ಕೂಳಿಗೂ ಗತಿಯಿಲ್ಲ.

ನೆನೆದು ಹಾಡುವಂತದ್ದಲ್ಲ ನನ್ನ ಬಾಲ್ಯ ,
ಪ್ರತಿ ದಿನವೂ ಗೋಳೇ ಎಲ್ಲ ,
ಹಂಗಿನ ಬಾಲ್ಯ ನಡೆದಿತ್ತು ಮೆಲ್ಲ ...

ರವರವನೆ ತಾಂಡವಿಸುತ್ತಿದ್ದ ರವಿಯ ಕೆಳಗೆ,
ಜನವನವೆ ಚಲಿಸುತ್ತಿದ್ದ ಆ ರಸ್ತೆಯ ಬದಿಗೆ ,
ಲೋಕದ ಅರಿವೇ ಇಲ್ಲ ಬಿದ್ದು ಮಲಗಿದ್ದ ತಂದೆಗೆ ,
ಝುಯ್ಯನೆ ಮುತ್ತಿದ್ದ ನೊಣದ ಅನುಭವವೂ ಇಲ್ಲ ಪ್ರಜ್ಞೆಗೆ ,
ಮಕ್ಕಳಿಹರು ಎಂಬ ನೆನಪೂ ಇಲ್ಲ ಈ ನನ್ನ ಪಿತಾಮಹನಿಗೆ.

"ಹೆಣ್ಣು ಗಂಡು ಸಮಾನರು " ಎಂಬ ಘೋಷಣೆಗೆ ಸಾಕ್ಷಿಯಾಗಿ,
ಮೈ ಮೇಲಿನ ಅರಿವೆಯ ಅರಿವೂ ಇಲ್ಲವಾಗಿ ,
ಮಕ್ಕಳು ಉಂಡವೋ ... ತಿಂದವೋ .. ಯೋಚನೆಯಿಲ್ಲ ಹಡೆದವಳಾಗಿ ,
ಕಂಠ ಪೂರ್ತಿ ಕುಡಿದು ರಸ್ತೆಯ ಆಚೆ ಬದಿಯ ತನ್ನದಾಗಿಸಿಕೊಳ್ಳುತ್ತಿದ್ದಳು, ಮತ್ತಲ್ಲಿ ಮಗ್ನಳಾಗಿ.

ನೆನೆದು ಸಂಭ್ರಮಿಸುವುದೇನಲ್ಲ ಬಿಡಿ ನನ್ನ ಬಾಲ್ಯ ,
ಆ ಪದದ ಅರ್ಥವೂ ತಿಳಿಯದ ಆ ಬಾಲ್ಯ .

ಸಂಚಾರಿ ದೀಪದ ಕಂಬ ಅಲ್ಲೊಂದಿತ್ತು ,
ನಾಲ್ಕು ದಾರಿಗಳು ಅಲ್ಲಿ ಸೇರುತ್ತಿತ್ತು ,
ಬಸಿರಲ್ಲಿ ಹಸಿವಿನ ಅಳುವೊಂದಿತ್ತು,
ಕಂಕುಳಲ್ಲಿದ್ದ ತಮ್ಮನ ಹೊಣೆ ಹಣೆ ಮೇಲಿತ್ತು .

ಆ ಹೊಣೆ , ಆ ಬಾಲ್ಯ ,
ಕೆಂಪು ದೀಪ ತೋರುವ ಕಡೆಗೆ ಓಡಿಸಿತ್ತು ...
ಕೇಳಬೇಕೆ ? ವಾಹನದಲ್ಲಿ ಆಸೀನರಾದವರ ಗತ್ತು ?
ಹಲ್ಲುಗಿಂಜಿ ಕೈ ಚಾಚಿದರೆ ,
ಹೊಟ್ಟೆ ತುಂಬುತ್ತಿತ್ತು ಎಂದೋ ಒಂದು ಹೊತ್ತು .

ಪಿತ್ರಾರ್ಜಿತ ಆಸ್ತಿಯೊಂದೇ ..
ಚಮ್ಮಾರನ ಉಪಕರಣಗಳು,
ಜೋಡಿಸಿದ್ದ ಅವ ನೋಡಿ ಯಾರಾದರು ಹುಡುಕುತ್ತ ಬಂದರೆ,
ನೆನಪಾಗುತ್ತಿತ್ತು ರುಚಿಯ ತಿನಿಸುಗಳು .
ಪುಟ್ಟ ಕೈಗಳಲ್ಲೇ ಚಪ್ಪಲಿಯ ಪಟ್ಟೆಂದು ಒಡೆದು,
ಅರಿದ ಅಂಗುಟವ ಒಲಿದರೆ,
ಬಣ್ಣದ  ಮಾತಾಡಿ, ಚಪ್ಪಲಿ ಒಡತಿಯ ಒಪ್ಪಿಸಿ,
ಪಾಲಿಶ್ ಗಿಲೀಶ್ ಮಾಡಿದರೆ,
ಮಡಿಲಿಗೆ ಬೀಳುತ್ತಿತ್ತು, ೫ ರಿಂದ ೧೦ ರೂಪಾಯಿಗಳು.  

ಬಂದ ಹಣದಲ್ಲಿ, ಅವ್ವ ಅಪ್ಪನಿಗೆ ಊಟ ತಂದಿಟ್ಟು,
ನಾಲ್ಕಾಣಿ ಮಿಟಾಯಿ ನನಗೆ ಒಂದಿಷ್ಟು,
ಅದರಲ್ಲಿ ಸೋದರನಿಗೂ ಕೊಟ್ಟು ,
ಓಡುತ್ತಿದ್ದೆ ಮತ್ತೆ....
ಕೆಂಪು ದೀಪ ತೋರುವ ಕಡೆಗೆ, ತಮ್ಮನ ಹೊತ್ತು,
ಸಂಕಟ ಪಡದಿರಿ , ನನ್ನ ಹಣೆಬರಹವೇ ಇಷ್ಟು.

ಬಾಲ್ಯ ಬಿಡಿಸದ ಒಗಟು ನನ್ನ ಬಾಲ್ಯ .... ಬಾಲ್ಯ .... ನನ್ನ ಬಾಲ್ಯ ....

---------------------- ರಶು ಪುಟ್ಟಿ