Tuesday, February 16, 2016

ಬಿಟ್ಟು ಹೋಗುವ ಮುನ್ನ

ತಪ್ಪು ತಿಳಿಯದಿರು,
ಅಪ್ಪಿ ಹೇಳುವೆ... 
ತಪ್ಪು ತಿಳಿಯದಿರು, ಅಪ್ಪಿ ಹೇಳುವೆ,
ಬಿಟ್ಟು ಹೋಗುವ ಮುನ್ನ, ವಿನತಿಯೊಂದ ತಂದಿರುವೆ....

ಕಾವ್ಯದ ಬೆಳಕಲ್ಲಿ, ಪದಗಳ ಮೆರವಣಿಗೆ,
ಪ್ರೇಮ ಪರ್ವತದ ನಿಧಿಯಲ್ಲಿ, ವಸಂತನ ಮಳಿಗೆ...
ಬಾ ಗೆಳೆಯ, ತಡ ಮಾಡದೆ,
ಕಿಂಚಿತ್ತಾದರೂ ಕಂಪಿಸಲಿ ನಮ್ಮ ಮಿಲನ ಮಲ್ಲಿಗೆ,
ಪಶ್ಚಿಮ ರತವೇರಿದ ಆ ರವಿಯೂ,
ಅಂಜುತ ಹೊನ್ನಂತೆ ಕಂಗೊಳಿಸಲಿ, ಕಂಡು ನಮ್ಮ ಮೆಲ್ಲಗೆ....

ತಪ್ಪು ತಿಳಿಯದಿರು,
ಅಪ್ಪಿ ಹೇಳುವೆ...
ತಪ್ಪು ತಿಳಿಯದಿರು ಅಪ್ಪಿ ಹೇಳುವೆ,
ಬಿಟ್ಟು ಹೋಗುವ ಮುನ್ನ ತರ್ಕವೊಂದ ತಂದಿರುವೆ ...

ಲಘು ಗುರು ಹಾಕಿ ಬರೆದ ಷಟ್ಪದಿಗಳಂತೆ,
ಬಗೆ ಬಗೆ ಬಣ್ಣ ಹೊಸೆದ ಕಾಮನಬಿಲ್ಲಂತೆ,
ಕೇಳಿಲ್ಲಿ, ಓ ಇನಿಯ,
ಮಿಡಿದ ಹೃದಯಗಳ ಬಲ್ಲ ವಿಧಿಯು, ಒಲ್ಲೆನೆಂದನೇಕೆ? ಒಪ್ಪಲಿಲ್ಲವೇಕೆ ?
ಪ್ರೇಮದುತ್ತುಂಗದ ದಿವ್ಯತೆಯ ಕಂಡು ಅಸೂಯೆಯೇಕೆ ? ಅವನಿಗೆ?? ...
ಹ್ಞೂ ಇರಲಿ ಬಿಡು,
ನೋವು ನಮಗಾದರು, ಬೇರೆಯವರಿಗೇಕೆ ?

ತಪ್ಪು ತಿಳಿಯದಿರು,
ಅಪ್ಪಿ ಹೇಳುವೆ...
ತಪ್ಪು ತಿಳಿಯದಿರು ಅಪ್ಪಿ ಹೇಳುವೆ,
ಬೊಗಸೆ ನೀರಲಿ ನೆನಪ ದೋಣಿ ತಂದಿರುವೆ....

ಮಂಜು ಮುಸುಕಿದ ವೇಳೆ,
pulsor ಬರೆದಿತ್ತು ಲಾಂಗ್ ರೈಡ್ ಓಲೆ...
ನೆನಪಿದೆಯೆ ಗೆಳೆಯ?
ಮೈಸೂರ್ ಹೈವೇಯಲ್ಲಿ,
speedomeeter ತೋರಿಸಿದ ೧೦೦ ರ ಅಂಕಿ?
ಅಲ್ಲೇ ಒಂದಂಗಡಿಯಲಿ,
ಕೈಲಿಡಿದ ಬ್ರೆಡ್ ಕಂಡು ಬಂದ ಮಂಕಿ ?
ಗುಲುಗದಿರು ನವಾಬ್.... ಚೀರಾಟದ ಪರಿಯ ನೆನೆದು.

ನೆನಪಿದೆಯೆ ?
ಬೈಟು ಟೀ, ಸುಟ್ಟ ತುಟಿ, ನೀನಿಟ್ಟ ಚುಂಬನದ ಧಾಟಿ ????
ಮುಂಗುರುಳ ಸರಿಸಿದ ಕೈಬೆರಳು, ಗಲ್ಲವ ಆಲಿಂಗಿಸಿ,
ನಾಚಿದ ಕಂಗಳ ಸುತ್ತಳತೆ ಅಳೆಯುತಿರೆ,
ನೆನಪಿದೆಯೆ ಗೆಳೆಯ ?
ನನ್ನುಸಿರ ಬಿಸಿಯು ನಿನ್ನೆದೆಯ ತಾಕಿದ್ದು?
ವಿದ್ಯುತ್ ಸಂಚರಣೆಯ ನಡುವೆ ಮೌನ ರಾಗ ಹಾಡಿದ್ದು?

ತಪ್ಪು ತಿಳಿಯದಿರು,
ಅಪ್ಪಿ ಹೇಳುವೆ...
ತಪ್ಪು ತಿಳಿಯದಿರು ಅಪ್ಪಿ ಹೇಳುವೆ,
ಕಣ್ಣ ಕೊನೆಯಲೆ ಕರೆಯ ಕೊರೆಯುವೆ....

ಭಾವನೆಗಳ ಬೆನ್ನತ್ತಿ, ಮನದೊಟ್ಟಿಗೆ ಸೆಣಸುತಿರೆ,
ಆಗಲೇ ಸೋಲಿಸಿದ ಕಂಗಳ, ಕಂಬನಿಯಲಿ ಸೆರೆ ಮಾಡಿರೆ,
ಕೇಳು ಎನ್ನ ಕಾವ್ಯದ ಒಡೆಯ,
ಹೊರಡುವೆನು ನಾನಿಂದು,
ಮರೆಯದಿರು ಗುರಿಯೆಂದು,
ನಗುತಲಿ ನೆನೆ ನನ್ನ, ಛಲ ಬಿಡದೆ ಸಾಧಿಸಿದಂದು ...
ಇನ್ನೆಂದು ಬರೆನೆಂದು, ಓ ಗೆಳೆಯ ಕುಗ್ಗದಿರು,
ಧೋಕ ಮಾಡಿರುವೆ, ಮೌಕ ನೋಡಿ ಕ್ಷಮಿಸಿಬಿಡು,
ಕೊನೆಯದಾಗಿ ಎಂದಿನಂತೆ ...

ತಪ್ಪು ತಿಳಿಯದಿರು,
ಅಪ್ಪಿ ಹೇಳುವೆ...
ತಪ್ಪು ತಿಳಿಯದಿರು ಅಪ್ಪಿ ಹೇಳುವೆ,
ಇದೇ ನನ್ನ ಕೊನೆಯ ದಿನವೆಂದು ...

                                                -- ರಶು ಪುಟ್ಟಿ