Friday, July 15, 2011

ಪ್ರತಿ ಮನೆಯ ಬೆಳಕಲ್ಲು ನಿನ್ನದೇ ಪ್ರತಿಬಿಂಬ



ನಮಿಸುವೆನು ಗುರು ನಿನಗೆ  ಭಕ್ತಿ ಭಾವದಿಂದ,
ಬೆಳಗುವುದು ಜಗವೆಲ್ಲ ನಿನ್ನ ಕರುಣೆಯಿಂದ.

ಪ್ರತಿ ಮನೆಯ ಬೆಳಕಲ್ಲು ನಿನ್ನದೇ ಪ್ರತಿಬಿಂಬ,
ಪ್ರತಿ ಮಗುವ ಬದುಕಲ್ಲೂ ನೀನೇ ಆಧಾರ ಕಂಬ.

ನಿನ್ನಿಂದಲೇ ತಾನೆ ಈ ಬಂಧು ಬಳಗ,
ನಿನ್ನಿಂದಲೇ ನಾವು ಈ ದೇಶದ ಸಲಗ.

ಪ್ರತಿ ಮನುಜನ ಮನದಲ್ಲಿ ನಿನಗೆ ಮಂದಿರವಿಹುದು
ಪ್ರತಿ ದಿನಕು ಪ್ರತಿ ಕ್ಷಣಕು ನಿನ್ನ ಹೆಸರಿಹುದು.

ಹೇಳೋ ಹೇಳೋ ಮಳೆರಾಯ

ನಿನಗೂ ಕೋಪವೇ ಬಡವರ ಮೇಲೆ,
ಪಟ-ಪಟ ಸುರಿಯುವೆ ಮಳೆರಾಯ.
ಧಾನ್ಯವ ಕೊಚ್ಚಿ, ಮನುಜರ ಚಚ್ಚಿ,
ಎಲ್ಲಿಗೆ ಹೋಗುವೆ ಜವರಾಯ?

ಕೋಗಿಲೆ ಕಂಠ ಮಧುರವು ನಿನಗೆ,
ರೈತನ ಕೂಗು ಕೇಳಿಸದೆ?
ರಂಭೆ ಊರ್ವಶಿ ಕಾದಿಹರಲ್ಲಿ,
ಬೇಗನೆ ಹೋಗೋ ಮಾರಾಯ.

ಎಲ್ಲರ ನಡುಗಿಸಿ, ಅಹಂ ಹುದುಗಿಸಿ,
ಧರೆಯನು ಸೇರಲು ಬಂದಿಹೆಯ?
ಸಾಗರ ಕಾಣುವ ತವಕದಿ ನೀನು,
ಪ್ರೀತಿಯ ಕಡಲನು ತಂದಿಹೆಯ?

ಹಿಂದೂ ಮುಸ್ಲಿಂ ಕ್ರೈಸ್ತರು ಎನ್ನದೆ,
ಎಲ್ಲರ ಮೈಲಿಗೆ ಕಳೆದಿರುವೆ.
ಕನ್ನಡ ತಮೀಳು ತೆಲುಗು ಎನ್ನದೆ,
ಎಲ್ಲರ ಮನೆಯ ತೊಳೆದಿರುವೆ,
     ಹೇಳು ಎಲ್ಲಿಗೆ ನೀನು ಹೊರೆಟಿರುವೆ?

Wednesday, July 13, 2011

ನಿನಗೇ ಬರೆದ ಪತ್ರ....

ನಿನಗೇ ಬರೆದ ಪತ್ರ.
ನಿನಗೇ ಬರೆದ ಪತ್ರ, ತಲುಪಿತೇ ನಿನ್ನ ಮನದಂಗಳವ ಗೆಳತಿ?
ಕಾದಿಹೆನು ಉತ್ತರಕೆ, ತರುವೆಯಾ ಒಪ್ಪಿಗೆಯ ಕಣ್ಣಲ್ಲೇ ಸರತಿ
ಹ್ಞೂ ಅನ್ನು.
 ಹ್ಞೂ ಅನ್ನು, ಈಗಲೇ ಆಗುತಿ ನೀ ಎನ್ನ ಹೆಂಡತಿ
ತುಸು ಘಾಟಿ ಎನ್ನಮ್ಮ , ಒಪ್ಪಿಸು ಬಾ ಆಗ ನೀ ಮನ ರಾಜ್ಯದ ಒಡತಿ.

ನಿನಗೇ ಬರೆದ ಪತ್ರ.
ನಿನಗೇ ಬರೆದ ಪತ್ರ, ನಿನ್ನಣ್ಣನ ಕರ ಹೊಕ್ಕಲಿಲ್ಲ ತಾನೆ?
ಅಡ್ಡಿಯಿಲ್ಲ ಸಿಕ್ಕರೂ , ಇಂತಿ ಹೆಸರಿಲ್ಲ ಬಲು ಜಾಣ ನಾನೇ.
ತೋರದಿರು ನಿನ್ನಕ್ಕನಿಗೆ....
ತೋರದಿರು ನಿನ್ನಕ್ಕನಿಗೆ ಅವಳ ಮೊದಲ ಪತ್ರದ ಒಡೆಯ ನಾನೇ,
ಈಗಲೂ ಇಷ್ಟವೇ .....
ಅದರೇನು ಮಾಡಲಿ, ಆಕೆಗೀಗ ಎರಡು ಮಕ್ಕಳು ತಾನೆ?

ನಿನಗೇ ಬರೆದ ಪತ್ರ.
ನಿನಗೇ ಬರೆದ ಪತ್ರ, ಉತ್ತರ ನನಗೇ ಇರಲಿ, ನಿನ್ಹೆಸರು ಕಮಲ ತಾನೇ....

ಬರಬಾರದೆ ಓ ಇನಿಯನೆ ?



ಈ ಸಂಜೆಯ ತಂಗಾಳಿಯು ಪಿಸುಗುಟ್ಟಿದೆ ನಿನ್ನ ಹೆಸರನೆ,
ಮೈ ಮುಟ್ಟಿದ ಈ ಹನಿಗಳು ಕೆದಕೆತ್ತಿವೆ ಹಳೆ ನೆನಪನೆ.
ಬರಬಾರದೆ ನೀ ಈಗಲೆ ವೈಮನಸನು ತಲೆಗ್ಹಚ್ಚದೆ,
ತಡಮಾಡದೆ ಬಳಿಸಾರುತ ಏನ ಕಂಗಳ ಬಳಿಗಟ್ಟದೇ.

ನೆನಪಾಗದೆ  ಓ ಇನಿಯನೆ ಜೊತೆ ಕಂಡ ಆ ದಿನಗಳು?
ಮುಂಗಾರಿನ ಆ ಮಳೆಯಲಿ ನಾಲ್ಗೆ ಸುಟ್ಟ ಬಿಸಿ ಒಡೆಗಳು?
ಬಿಗಿದ್ಹಿಡಿದ ಕೊಡೆಯಡಿಯಲಿ ಪಿಸುಗುಟ್ಟಿದ ಜೇನ್ನುಡಿಗಳು?
ಹಸಿಯಾಗಿದೆ ನಾವೊಟ್ಟಿಗೆ ನಡೆದ್ಹೋದ ಈ ಗಲ್ಲಿಗಳು ?

ಹುಡುಕುತ್ತಿವೆ ಏನ ಕಂಗಳು ಎವೆಯಿಕ್ಕದೆ ನಿನ್ನ ದಾರಿಯೇ,
ಚಡಪಡಿಸುತ ಮನ ನೋಡಿದೆ ನಡೆದಾಡುವ ಮಂದಿ ಮೊರೆಯೇ ....
ನಿನ್ನೊಲುಮೆಯ ಕಿರುತಪ್ಪಿಗೆ ಕ್ಷಮೆ ಇಲ್ಲವೆ ಓ ಇನಿಯನೆ ?
ಇನ್ನೆಸೆಗೆನು ಮನ್ನಿಸೆನ್ನನು ಬಾ ಒಮ್ಮೆ ಮನದೊಡೆಯನೆ