Tuesday, June 18, 2013

ನೆನಪಾಗಬೇಕೆ ? ಶಾಕುಂತಲೆ
~~~~~~~~~~~~~






60ರ ಹರೆಯದಲ್ಲಿ ನೆನಪಾಗಬೇಕೆ ಶಾಕುಂತಲೆ ?
ನಿಟ್ಟುಸಿರೊಂದಿಗೆ ನಾಲಗೆ ಹೊರಳಿದಾಗ ,
ದುರುಗುಟ್ಟಬೇಕೇ? ಪಕ್ಕದಲೆ ಕುಳಿತಿದ್ದ ನನ್ನಾಕೆ ಕಮಲೆ .....
ಬೊಚ್ಚು ಬಾಯಿಂದ ನಗೆಯೊಂದ ಬೀರುತ್ತ,
ಎದ್ದು ಹೊರಟೆನು ಹೂದೋಟದ ಕಡೆಗೆ .....
60ರ ಹರೆಯದಲ್ಲಿ ನೆನಪಾಗಬೇಕೆ ?? ಶಾಕುಂತಲೆ ......

ಕೆಂಗುಲಾಬಿ ತೊಟ್ಟ ನೀಳ ಜಡೆ,
ಮುಖದಲ್ಲಿ ಸದಾ ಮುಗ್ಧ ನಗೆ.
ಕಾಡಿಗೆಯು ಸೇರಿದ್ದ ಆ ಕಣ್ಣ ಅಂಚು,
ತೆಪ್ಪಗಿದ್ದ ನನಗಾಗೆ ಮಾಡಿತ್ತು ಸಂಚು.

ಆಗ ನಾನಿದ್ದೆ ಕಾಲೇಜಿನ ಕೊನೆ ಸಾಲಿನಲ್ಲಿ,
ದಾಖಲಾತಿ ಆಗಬೇಕಿತ್ತೇ? ಆಕೆ, ಮೊದಲ ಸಾಲಿನಲ್ಲಿ.
ಬೇಡಿದ್ದೆ ಗಣಪನ ಆಕೆಗಾಗಿ ನಪಾಸಾಗಲೆಂದು,
ಕಾಣೆಯಾಗಬೇಕೆ? ಆಕೆ , ದೇವರು ಕೃಪೆ ತೋರಿದಂದು ....

ನೆನಪಾಗಬೇಕೆ ? ಶಕುಂತಲೆ ..........

60ರ ಹರೆಯದಲ್ಲಿ ನೆನಪಾಗಬೇಕೆ ??
ಲಿಂಗಾಯತರ ವೋಣಿಯ, ಒಬ್ಬಾಕಿ ಚೆಲುವಿ,
ಎಲ್ಲಿಹಳೋ ಕಾಣೆ,
ಹೇಗಿಹಳೋ ಕಾಣೆ,
ಕೃಷ್ಣವರ್ಣದ  ಬೆಡಗಿ ಶಾಕುಂತಲೆ......

60ರ ಹರೆಯದಲ್ಲಿ ಕಾಣುವ ಆಸೆ ತಾರಬೇಕೆ ? ಶಾಕುಂತಲೆ ....

ಪಡುವಣವ ಕೆಂಪಾಗಿಸಿ ಮುಳುಗುತ್ತಿದ್ದ ನೇಸರನು,
"ಕೂತಿರೇಕೆ ಗೌಡರೇ ?"
ಎಂದಿದ್ದರು ಹೊರಡುತಿದ್ದ ಪರಿಚಿತರು ,
ವಾಕಿಂಗ್ ಸ್ಟಿಕ್ ಹಿಡಿದು ಹೊರಟು ನಿಂತ ನಾನಂದೆ ಮನದಲಿ,
60ರ ಹರೆಯದಲಿ ನೆನಪಾಗಬೇಕೆ ? ಶಾಕುಂತಲೆ .....

ಮನೆಯ ಸೇರಿದ ನನ್ನ ಕುಶಲ ವಿಚಾರಿಸಿದ ಮಗನ ಗೆಳೆಯ ಗೋಪಿ,
ಮಾತಿನಲೆ ಅಂದ "ನನ್ನವ್ವ ನಿಮ್ಮೂರಿನವಳು" ಹೀರುತ್ತ ಕೈಲಿದ್ದ ಕಾಪಿ.
ಹೆಸರ ಕೇಳಿದ ಎನ್ನ ನೋಡುತ್ತ ನುಡಿದ "ಶಾಕುಂತಲೆ"........
ಅರಳಿದ ಎನ್ನ ಮುಖವ ನೋಡುತ
ಹುಬ್ಬುಗಟ್ಟಿದಳು ಪಕ್ಕದಲ್ಲಿದ್ದ ಕಮಲೆ .....

60ರ ಹರೆಯದಲಿ ನೆನಪಾಗಬೇಕೆ ? ಶಾಕುಂತಲೆ .....

"ನಾಳೆ ಗೋಪಿಯ ಮನೆಗೋಗುವ"
ಎಂದಳು ಮಲಗುವ ಮುನ್ನ ಕಮಲೆ ,
ರಾಗವೆಳೆದಳು, ಹೊದಿಕೆ ಎಳೆಯುತ,
"35 ವರ್ಷ ಸಂಸಾರವಾದ ಮೇಲೆ
ನೆನಪಾಗಬೇಕೆ ಶಾಕುಂತಲೆ ?"

ಹೌದಲ್ಲವೇ .....
60ರ ಹರೆಯದಲ್ಲಿ ನೆನಪಾಗಬೇಕೆ ......  ಶಾಕುಂತಲೆ ???????

                                             -- ರಶು ಪುಟ್ಟಿ


ಓ  ಚಂದಿರ,
ಇರುಳ ತೇರ ಏರಿ  ಬಂದ ಇಂದಿರ...

ನನ್ನದೊಂದು ಪುಟ್ಟ ಕನಸ ಹೇಳಬಹುದಿತ್ತು ...
ನೀನಿಲ್ಲಿ ಬಂದಿದ್ದರೆ,
ಜೊತೆಯಾಗಿ ನಿಂತಿದ್ದರೆ ,
ಬಳಿಯಲ್ಲಿ ಕುಳಿತಿದ್ದರೆ....

ಓ ಚಂದಿರ,
ಬೆಳದಿಂಗಳೇ ನಿನ್ನ ಮಂದಿರ.

ಮನದಲ್ಲಿ ಚಿಮ್ಮಿರುವ ಬಾವನೆಗಳ ರಾಶಿ ಮಾಡಬಹುದಿತ್ತು....
ನೀ ಜಾರಿ  ಧರೆಗೆ ಇಳಿದಿದ್ದರೆ,
ನನ್ನೆದುರು ನೀ ಕುಳಿತಿದ್ದರೆ,
ಕಣ್ಣಲ್ಲಿ  ಸ್ನೇಹ ಕಂಡಿದ್ದರೆ.

ಓ ಚಂದಿರ
ಪ್ರೇಮಿಗಳಿಗೆ ನೀನೆ ಸುಂದರ.

ಬಾಳಿನ ಕಥೆಯನ್ನು ಕಟ್ಟಬಹುದಿತ್ತು....
ನೀನಿಂದು ಬಂದಿದ್ದರೆ,
ಕೈ ಹಿಡಿದು ನಡೆದಿದ್ದರೆ,
ನನ  ಮಾತಿಗೆ ಹ್ಞು ಅಂದಿದ್ದರೆ.

ಓ  ಚಂದಿರ ....
       
                      --ರಶು ಪುಟ್ಟಿ